ಷೊಪೆನ್ ಹೋವರ್
	1788-1860. ಜರ್ಮನಿಯ ಪ್ರಸಿದ್ಧ ತತ್ತ್ವಶಾಸ್ತ್ರಜ್ಞ. ಇವನು ಡ್ಯಾನ್‍ಜಿಗ್‍ನಲ್ಲಿ 1788 ಫೆಬ್ರವರಿ 22ರಂದು ಜನಿಸಿದ. ಪ್ರಾಥಮಿಕ ಶಿಕ್ಷಣವನ್ನು ಗೋಧಾ ಹಾಗೂ ವೈಮಾರ್ ಎಂಬಲ್ಲಿ ಮುಗಿಸಿ (1809), ಗುಟಿಜನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ. ಇವನು ಪ್ಲೇಟೊ ಹಾಗೂ ಇಮ್ಯಾನ್ಯುಯಲ್ ಕಾಂಟ್‍ರ ಬರೆವಣಿಗೆ ಗಳಿಂದ ಹೆಚ್ಚು ಪ್ರಭಾವಿತನಾದ. ಅನಂತರ ಬರ್ಲಿನ್ ವಿಶ್ವವಿದ್ಯಾಲಯ ದಲ್ಲಿ ಫಿಟ್ಫಿಯ ಬರೆವಣಿಗೆಗಳೂ ಇವನ ಮೇಲೆ ಗಮನಾರ್ಹ ಪ್ರಭಾವ ಬೀರಿದವು. ಹೈಡಲ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ. 

	ಇವನು ಏಕಾಂಗಿಯಾಗಿ ಬೆಳೆದ ಪರಿಣಾಮ ಜೀವನದಲ್ಲಿ ಸುಖ-ಸಂತೋಷಗಳನ್ನು ಅನುಭವಿಸಲಿಲ್ಲ. ನಿರಾಶಾವಾದಿಯಾಗಿ ಪರಿವರ್ತನೆ ಗೊಂಡ. ತಾಯಿಯೊಡನೆ ಮುನಿಸಿಕೊಂಡು ಮನೆಬಿಟ್ಟು ಹೊರಬಂದ. ಅನಂತರ ಇವನಿಗೆ ಎಫ್.ಮೇ ಎಂಬಾತನ ಪರಿಚಯವಾಯಿತು. ಜೀವನದಲ್ಲಿ ಶಾಂತಿ ಪಡೆಯಬೇಕಾದರೆ ಹಿಂದುಧರ್ಮದ ಮೊರೆಹೋಗ ಬೇಕೆಂದು ಎಫ್.ಮೇ ತಿಳಿಸಿದ. ಇದರಿಂದಾಗಿ ಇವನು ಹಿಂದುಧರ್ಮ ಹಾಗೂ ತತ್ತ್ವಶಾಸ್ತ್ರವನ್ನು ಅಧ್ಯಯನ ಮಾಡಿದ. ಭಾರತೀಯ ಉಪನಿಷತ್ತುಗಳನ್ನು ಮೊದಲ ಬಾರಿಗೆ ಲ್ಯಾಟಿನ್ ಭಾಷೆಗೆ ಅನುವಾದಿಸಿದ. 

	ಈತ ನಿರಾಶಾವಾದವನ್ನು ಹೇಳಿದರೂ ಕಲೆಯ ಬಗ್ಗೆ ಉನ್ನತ ಭಾವನೆಗಳನ್ನು ಹೊಂದಿದವನಾಗಿದ್ದ. ಕಲೆಯನ್ನು ಕುರಿತು ಇವನ ಅಭಿಪ್ರಾಯವಿದು : ಕಲೆ ಬಾಳಿನ ಬೇಗೆಯಿಂದ ತಪ್ಪಿಸಿ ಆನಂದಕರವಾದ ಮತ್ತೊಂದು ಪ್ರಪಂಚಕ್ಕೆ ಕರೆದೊಯ್ಯುವ ಸಾಧನ. ಜೀವನದಲ್ಲಿ ಜಿಗುಪ್ಸೆಹೊಂದಿದವನಿಗೆ ಕಲೆಯೊಂದೇ ವಿಹಾರೋದ್ಯಾನ. ಜೀವನದಲ್ಲಿ ದೊರೆಯದ ಶಾಂತಿ, ಆನಂದ, ಸಂತೃಪ್ತಿಗಳು ಕಲೆಯಲ್ಲಿ ಯಥೇಚ್ಛವಾಗಿ ದೊರೆಯುತ್ತವೆ. ಚೈತನ್ಯ ತಾನೇ ತಾನಾಗಿ ಪ್ರವಹಿಸುತ್ತಿರುವ ಕಲೆಗಳಲ್ಲಂತೂ ಇಂತಹ ಆಕರ್ಷಕಶಕ್ತಿ ಹೆಚ್ಚು. ಜಡಕಲೆಗಳೆನ್ನಬಹುದಾದ ಶಿಲ್ಪ, ಚಿತ್ರಗಳಿಗಿಂತ ಚೈತನ್ಯ ತುಂಬಿರುವ ಕಲೆಗಳಾದ ನೃತ್ಯ, ನಾಟಕ, ಸಂಗೀತಗಳಲ್ಲಿ ಮನಸ್ಸನ್ನು ಆಕರ್ಷಿಸುವ ಶಕ್ತಿ ಅಮಿತವಾಗಿದ್ದು, ಅದರಲ್ಲೂ ಸಂಗೀತ ಅತ್ಯುತ್ತಮ. ಸಂಗೀತದ ಸ್ವರ ಮಾಧುರ್ಯದಲ್ಲಿ ತಲ್ಲೀನನಾದವನು ನಿರ್ಲಿಪ್ತತೆಯ ಪರಮ ಗಂತವ್ಯ ಮುಟ್ಟುತ್ತಾನೆ. ಇತರ ಕಲೆಗಳನ್ನು ಸತ್ಯದ ಪ್ರತಿಬಿಂಬವೆಂದು ಕರೆಯಬಹುದಾದರೆ ಸಂಗೀತವನ್ನು ಸಾಕ್ಷಾತ್ ಸತ್ಯ ಸ್ವರೂಪವೆನ್ನಬಹುದು. ಈ ಹಿನ್ನೆಲೆಯಲ್ಲಿ ಕಲೆ ಒಂದು ಮಾದಕ ದ್ರವ್ಯ. ಜೀವನದ ಸಂಕಷ್ಟಗಳಿಂದ, ನಿರಾಶೆಗಳಿಂದ, ವ್ಯಸನಗಳಿಂದ ಮುಕ್ತಗೊಳಿಸಿ ಕ್ಷಣಕಾಲ ನಿರ್ಲಿಪ್ತ ಅಲೌಕಿಕ ಆನಂದ ಕ್ಷೇತ್ರಕ್ಕೆ ಕರೆದೊಯ್ಯುವ ಸಾಧನ. 

	ಇವನು ದಿ ವಲ್ರ್ಡ್ ಆಸ್ ವಿಲ್ ಅಂಡ್ ರೆಪ್ರಸೆಂಟೇಶನ್ (1819) ಎಂಬ ಪುಸ್ತಕ ಬರೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧನಾದ. ವಿಲ್ ಇನ್ ನೇಚರ್ (1836), ಟೂ ಮೇನ್ ಪ್ರಾಬ್ಲಮ್ಸ್ ಆಫ್ ಎಥಿಕ್ಸ್ ಎಂಬ ಪುಸ್ತಕಗಳನ್ನು ರಚಿಸಿದ. ಟೂ ಮೇನ್ ಪ್ರಾಬ್ಲಮ್ಸ್ ಆಫ್ ಎಥಿಕ್ಸ್ ಎಂಬ ಪುಸ್ತಕಕ್ಕಾಗಿ ಇವನಿಗೆ ಪ್ರಪಂಚ ಪ್ರಸಿದ್ಧ ಗಯಟೆ ಪ್ರಶಸ್ತಿ ಲಭಿಸಿತು. 

	ಇವನು ಸ್ವಿನೋಜ ಹಾಗೂ ಹೆಗೆಲ್‍ರ ವಾದಗಳನ್ನು ತೀವ್ರವಾಗಿ ಖಂಡಿಸಿದನಲ್ಲದೆ ಮತಧರ್ಮಗಳಲ್ಲಿದ್ದ ಮೂಢನಂಬಿಕೆ, ಸಂಪ್ರದಾಯ ಗಳನ್ನು ಟೀಕಿಸಿದ. ಇವನ ನಿರಾಶಾವಾದದ ಆಶಯ ಹೆಚ್ಚಾಗಿ ಬೌದ್ಧ ಧರ್ಮದ ನಿರ್ವಾಣವಾದವನ್ನು ಹೋಲುತ್ತದೆ. ಸರ್ವಧರ್ಮ ಸಮಾನತೆ ಯಲ್ಲಿ ನಂಬಿಕೆಯುಳ್ಳವನಾಗಿದ್ದ ಈತ 1860 ಸೆಪ್ಟೆಂಬರ್ 21ರಂದು ನಿಧನನಾದ. 
											(ಡಿ.ಎನ್‍ಎ.; ಕೆ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ